ಕುಸೀದ ಪದ್ಧತಿ

ಕಾನೂನು ಕಟ್ಟಳೆಗಳಲ್ಲಿ ಅವಕಾಶವಿರುವುದಕ್ಕಿಂತ ದುಬಾರಿ ಬಡ್ಡಿಗೆ ಸಾಲ ನೀಡುವುದನ್ನು ಕುಸೀದ ಪದ್ಧತಿ ಎನ್ನುತ್ತಾರೆ (ಯುಸ್ಯೂರಿ). ವೇದಗಳ ಕಾಲದಿಂದಲೂ ಭಾರತದಲ್ಲಿ ಕುಸೀದ ಪದ್ದತಿ ಬಳಕೆಯಲ್ಲಿದೆ. ಬಡ್ಡಿಗಾಗಿ ಸಾಲ ಕೊಡುವುದು—ಎಂದಷ್ಟೇ ಆಗ ಇದಕ್ಕೆ ಇದ್ದ ಅರ್ಥ. ದೇಶದ ಅರ್ಥವ್ಯವಸ್ಥೆಯಲ್ಲಿ ಕುಸೀದಕ್ಕೂ ಒಂದು ಸ್ಥಾನವಿದ್ದುದನ್ನು ಶುಕ್ರನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಕುಸೀದ ಕೃಷಿ ವಾಣಿಜ್ಯಂ ಗೋರಕ್ಷ ವಾರ್ತಯೋಚ್ಯತೇ ಎಂಬ ವಿವರಣೆ ಶುಕ್ರನೀತಿಯಲ್ಲಿ ದೊರಕುತ್ತದೆ. ರೂಢಿಯನ್ನು ಮೀರಿ ಬಂಡವಾಳವನ್ನು ಬಡ್ಡಿಗೆ ಕೊಟ್ಟರೆ ಕುಸೀದಪಥವಾಗುತ್ತದೆ ಎಂಬುದು ಇದಕ್ಕೆ ನೀಡಲಾಗಿರುವ ವಿವರಣೆ. ಹಣವನ್ನು ಅಥವಾ ಮೂಲಧನÀವನ್ನು ಬಡ್ಡಿಗಾಗಿ ಕೊಡುವುದು ಎಂಬುದು ಭಾಗವತ ಪುರಾಣಗಳಲ್ಲಿ ಈ ಶಬ್ದಕ್ಕಿರುವ ಅರ್ಥ. 

	ಬಡ್ಡಿ ತೆಗೆದುಕೊಳ್ಳುವುದು ನ್ಯಾಯಸಮ್ಮತವಾದರೂ ರೂಢಿಯನ್ನು ಮೀರಿದರೆ ಕುಸೀದವಾಗುತ್ತದೆ ಎಂಬ ಭಾವನೆ ಸಾಮಾನ್ಯವಾದ್ದು. ಯಾವ ನಿಂದೆಗೂ ಅಂಜದೆ ಬಂಡವಾಳವನ್ನು ಸುಲಭವಾಗಿ ಕೊಟ್ಟು ಆದಾಯ ಪಡೆಯುವುದನ್ನು ಕುಸೀದವೆಂದು ಕರೆಯಲಾಗಿದೆ. ಕಾಲಕ್ರಮದಲ್ಲಿ ಬಂಡವಾಳವನ್ನು ಸಾಲವಾಗಿ ಕೊಡಲು ಪ್ರಾರಂಭಿಸಿ ಕೊನೆಗೆ ಅತಿಯಾದ ಬಡ್ಡಿಯನ್ನು ವಿಧಿಸಿ ಹಿಂಸಿಸಲು ತೊಡಗಿದಾಗ, ಈ ಕ್ರಮದ ವ್ಯವಹಾರಕ್ಕೆ ಕುಸೀದ ಎಂಬ ಹೆಸರು ಬಂತು.

	ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಬಡ್ಡಿಗಾಗಿ ಹಣವನ್ನು ಕೊಡುವ ಕ್ರಿಯೆಗೆ ಕುಸೀದವೆಂದು ಕರೆದರೆ ಜರ್ಮನ್ ಸಾಹಿತ್ಯದಲ್ಲಿ ಎಲ್ಲ ರೀತಿಯ ಆರ್ಥಿಕ ದುರುಪಯೋಗವನ್ನೂ ಕುಸೀದವೆಂದು ಕರೆಯಲಾಗಿದೆ. ಕೂಲಿಯ ದುರುಪಯೋಗ ಬಾಡಿಗೆಯ ದುರುಪಯೋಗ-ಇವು ಕುಸೀದದ ಸಾಮಾನ್ಯ ವಿಧಿಗಳು. 	

	ಕುಸೀದ ವ್ಯವಹಾರದಲ್ಲಿ ಯಾವುದು ನಿಖರವಾದದ್ದು ಅಥವಾ ಶಾಶ್ವತವಾದದ್ದು ಎಂದು ಹೇಳಲು ಕóಷ್ಟವಾಗುತ್ತದೆ. ಆರ್ಥಿಕ ವ್ಯವಸ್ಥೆಯಲ್ಲಿ ಒಪ್ಪಂದ ಸ್ವಾತಂತ್ರ್ಯವಿಲ್ಲದಿದ್ದಾಗ ಯಾವುದು ನ್ಯಾಯ, ಯಾವುದು ಅನ್ಯಾಯವಾದುದು ಎಂದು ನಿರ್ಧರಿಸಲು ಕಷ್ಟವಾಗುತ್ತದೆ. ಮಧ್ಯಯುಗದಲ್ಲಿ ಇದನ್ನು ಅಧರ್ಮ ಎಂದು ಖಂಡಿಸಿದರೆ ಮುಂದಿನ ಶತಮಾನದಲ್ಲಿ ಇದು ಸಾಮಾನ್ಯ ನಡೆವಳಿಕೆಯಾಯಿತು. ಕೆಲವು ದೇಶಗಳಲ್ಲಿ ಈ ವ್ಯವಹಾರವನ್ನು ರದ್ದುಮಾಡಿದರೆ, ಮತ್ತೆ ಕೆಲವು ದೇಶಗಳಲ್ಲಿ ಇದಕ್ಕೆ ಅನುಮತಿ ಕೊಡಲಾಯಿತು. ಬೆಲೆ, ಕೂಲಿ, ಬಡ್ಡಿ, ಮತ್ತು ಲಾಭ ಇವು ವಿಶ್ವವ್ಯಾಪಿಯಾದ ಆರ್ಥಿಕ ರೂಪಗಳು. ಕುಸೀದ ಆಯಾ ಕಾಲಗಳಲ್ಲಿಯ ನೈತಿಕ ಮತ್ತು ಕಾನೂನಿನ ಕಟ್ಟಳೆಗಳ ಮೇಲೆ ರೂಪಗೊಳ್ಳುತ್ತಿತ್ತು.

	ಕುಸೀದವನ್ನು ಕುರಿತ ಭಾವನೆಗಳು ಗ್ರೀಕ್, ರೋಮನ್, ಯಹೂದ್ಯ ಮತ್ತು ಕ್ರೈಸ್ತ ತತ್ವಜ್ಞರಿಂದ ಪಾಶ್ಚಾತ್ಯ ದೇಶಗಳಲ್ಲಿ ರೂಪಗೊಂಡುವು. ಪ್ರಾಚೀನ ಭಾರತದ ಮತ್ತು ಪ್ರಾಚೀನ ಕಾಲದ ಮೋಸಸನ ನ್ಯಾಯಸೂತ್ರಗಳು ಕುಸೀದ ವ್ಯವಹಾರವನ್ನು ನಿಷೇಧಿಸಿದ್ದುವು. ಪ್ರಾಚೀನ ಕಾಲದಲ್ಲಿ ಶೇ. 5 ಕ್ಕಿಂತ ಹೆಚ್ಚಿನ ಬಡ್ಡಿಯನ್ನು ನಿಷೇಧಿಸಲಾಗಿತ್ತು. ಪಂಚಕಂ ಶತಂ ಅರ್ಹತಿ ಎಂದು ಮನುಸ್ಮøತಿ ಹೇಳುತ್ತದೆ. ಯಹೂದ್ಯರಲ್ಲಿ ವಿಚಿತ್ರವಾದ ಪದ್ಧತಿ ಇತ್ತು. ತಮ್ಮ ಜನರಿಂದ ಅವರು ಹೆಚ್ಚಿನ ಬಡ್ಡಿಯನ್ನು ತೆಗೆದುಕೊಳ್ಳುವಂತಿರಲಿಲ್ಲ. ಪರದೇಶೀಯರಿಂದ ವಿಪರೀತ ಬಡ್ಡಿಯನ್ನು ತೆಗೆದುಕೊಳ್ಳುವುದಕ್ಕೆ ಅವಕಾಶವಿತ್ತು. ಅಥೆನ್ಸಿನಲ್ಲಿ ಸೋಲನ್ನನ ಶಾಸನಗಳು ಕೃಷಿಕರಿಗೆ ಹೆಚ್ಚಿನ ದರದ ಬಡ್ಡಿಯನ್ನು ವಿಧಿಸುವುದಕ್ಕೆ ಅವಕಾಶವಿರಲಿಲ್ಲ. ರೋಂ ಸಾಮ್ರಾಜ್ಯದಲ್ಲಿ ಬಡ್ಡಿಯ ಗರಿಷ್ಠಮಿತಿ ಸೇ. 10. ಅಲ್ಲಿ ಕ್ರಿ. ಪೂ. 342ರಲ್ಲಿ ಸಾಲಕ್ಕೆ ಯಾವ ರೀತಿಯ ಪ್ರತಿಫಲವನ್ನೇ ಆಗಲಿ ತೆಗೆದುಕೊಳ್ಳುವುದನ್ನು ನಿಷೇಧಿಸುವ ಶಾಸನಗಳನ್ನು ರಚಿಸಲಾಗಿತ್ತು. ಆದರೆ ಈ ಶಾಸನದ ಜಾರಿ ಮಾತ್ರ ಆಗಲಿಲ್ಲ. ನೌಕಾ ವ್ಯಾಪಾರಕ್ಕೆ ವಿಪರೀತವಾದ ಬಡ್ಡಿ ವಿಧಿಸಲಾಗುತ್ತಿತ್ತು ರೋಮಿನಲ್ಲಿ ಐಶ್ವರ್ಯವಂತರು ಅತಿಯಾದ ಬಡ್ಡಿಯನ್ನು ಗಳಿಸುತ್ತಿದ್ದುದರಿಂದಲೇ ಪ್ರಬಲರಾಗಿದ್ದರೆಂದು ಹೇಳಲಾಗಿದೆ. ಸಾಮಾನ್ಯ ಸಾಲಗಳಿಗೆ ಶೇ. 6ರಂತೆ, ವ್ಯಾಪಾರಿಗಳಿಗೆ ಮತ್ತು ಉದ್ಯಮಿಗಳಿಗೆ ಶೇ. 8ರಂತೆ, ಸಮಾಜದಲ್ಲಿ ಉನ್ನತಮಟ್ಟದಲ್ಲಿದ್ದವರಿಗೆ ಶೇ. 4ರಂತೆ, ನೌಕಾವ್ಯಾಪಾರಿಗಳಿಗೆ ಶೇ. 12ರಂತೆ, ಬಡ್ಡಿ ವಿಧಿಸಬೇಕೆಂದು ಅನಂತರಕಾಲದಲ್ಲಿ ಜಸ್ಟಿನಿಯನ್ ಗೊತ್ತು ಮಾಡಿದ್ದ. 

	ಪ್ರಾಚೀನ ತತ್ತ್ವಜ್ಞಾನಿಗಳ ಬೋಧನೆಯಿಂದ ಮತ್ತು ಕ್ರೈಸ್ತಪಂಥದ ಪ್ರಭಾವದಿಂದ ನಿಷ್ಠುರವಾದ ಪ್ರತಿಬಂಧಕಗಳು ಜಾರಿಗೆ ಬಂದುವು. ಆಟಿಕ ತತ್ತ್ವಜ್ಞಾನಿಗಳು ಕುಸೀದ ವ್ಯವಹಾರದ ವಿರುದ್ಧ ನಿಲವು ತಳೆದಿದ್ದರು. ಗ್ರೀಕ್ ತತ್ತ್ವಜ್ಞಾನಿಗಳಾದ ಪ್ಲೇಟೊ ಮತ್ತು ಅರಿಸ್ಟಾಟಲರು ಆರ್ಥಿಕ ಅಭಿವೃದ್ಧಿಗೆ ಬ್ಯಾಂಕುಗಳು ಆವಶ್ಯಕವೆಂಬುದನ್ನು ಮನಗಂಡಿದ್ದರು. ಅಲ್ಲದೆ ಕುಸೀದ ಪದ್ಧತಿಯಲ್ಲಿ ಅಂತರ್ಗತವಾಗಿರುವ ಸಾಮಾಜಿಕ ಅಪಾಯ ಅವರ ಅರಿವಿಗೆ ಬಂದಿತ್ತು. ಮಿತಿಮೀರಿ ಲಾಭಗಳಿಸುವುದಕ್ಕೆ ಸಮಾಜವು ವಿರೋಧವಾಗಿತ್ತು. ಸಾಲ ಕೊಡುವುದನ್ನು ಖಂಡಿಸಿ, ಲಾಭೋನ್ಮತ್ತವಾದ ಅರ್ಥ ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯಬಹುದೆಂದು ಅವರು ನಂಬಿದ್ದರು. ಲೇವಾದೇವಿಯ ಮೂಲಕ ಅಪಾರ ಬಡ್ಡಿ ಗಳಿಸಿ ಐಶ್ವರ್ಯವಂತರಾಗುವುದನ್ನು ತತ್ತ್ವಜ್ಞಾನಿಗಳು ಧಿಕ್ಕರಿಸಿದರು. 

	ಕುಸೀದಕ್ಕೆ ಗ್ರೀಕ್ ಸಮಾನಪದ ಟೋಕಸ್-ಜೀವಿಯ ಸಂತಾನ. ಹಣ ನಿರ್ಜೀವ ವಸ್ತುವಾದ್ದರಿಂದ ಅದು ವಿನಿಮಯ ಮಾಧ್ಯಮವೇ ಹೊರತು ಹೊಸ ನಾಣ್ಯಗಳನ್ನು ವೃದ್ಧಿಮಾಡುವುದಿಲ್ಲ ಎಂಬುದು ಅರಿಸ್ಟಾಟಲನ ಅಭಿಪ್ರಾಯವಾಗಿತ್ತು. ಸಾಲವಾಗಿ ಕೊಟ್ಟ ಹಣಕ್ಕೆ ಪ್ರತಿಫಲ ಬೇಡುವಾತ ಹಣದಿಂದ ಹಣಕ್ಕೆ ಜನ್ಮ ಕೊಡುತ್ತಾನೆ. ಈ ಕ್ರಿಯೆ ಪ್ರಕೃತಿನಿಯಮಕ್ಕೆ ವಿರೋಧವಾದ್ದು ಎಂದು ಆತ ಹೇಳಿದ್ದ. ಯಾವ ಪ್ರತಿಫಲವೂ ಇಲ್ಲದೆ ಸಾಲ ಕೊಡಬೇಕು ಎಂದು ಧರ್ಮಗ್ರಂಥಗಳು ಸಾರಿದ್ದರಿಂದ, ಕುಸೀದ ವ್ಯವಹಾರಕ್ಕೆ ಆ ಕಾಲದಲ್ಲಿ ಮನ್ನಣೆಯಿರಲಿಲ್ಲ. ರೋಮನ್ ಚರ್ಚ್ ಇದೇ ಧೋರಣೆ ತಳೆÀದಿತ್ತು. ಪ್ರಾಚೀನ ಅರ್ಥವ್ಯವಸ್ಥೆಯಲ್ಲಿ ಅನುಭೋಗಕ್ಕಾಗಿ ಸಾಲಮಾಡುತ್ತಿದ್ದುದೇ ಹೆಚ್ಚಾಗಿತ್ತು. ಸಾಲದ ಮೊತ್ತ ಕ್ರಮವಾಗಿ ಭಾರವಾಗಿ ಸಾಲಗಾರನಿಗೆ ದುರ್ಭರವಾಗಿ ಪರಿಣಮಿಸುತ್ತಿತ್ತು. ಮಧ್ಯಯುಗದಲ್ಲಿ ಐಶ್ವರ್ಯವಂತರು ಸಾಲ ಕೊಡುವಾಗ ಲಾಭ ಪಡೆಯದೆ ಕೊಡುತ್ತಿರಲಿಲ್ಲ. ಒಂದು ಲೇವಾದೇವಿಯ ಅಂಗವಾಗಿ ಹಣದ ಸ್ವೀಕರ್ತ(ಪೇಯೀ)ನಿಗೆ ಹಣ ಕೊಡುವುದು ಮಾರಾಟವಾಗುತ್ತದೆ. ಅದನ್ನು ಕೊಳ್ಳುವವನು ಅವಕ್ಕೆ ಕೊಡಬೇಕಾದ ಬೆಲೆಯೆಂದರೆ ಅಷ್ಟೇ ಹಣ; ಅದಕ್ಕಿಂತ ಹೆಚ್ಚುಕೊಡುವುದು ಸಲ್ಲದು. ಸಾಲದಾತ ತಾನು ಸಾಲವಾಗಿ ಕೊಟ್ಟಷ್ಟನ್ನೇ ವಾಪಸು ಪಡೆಯಬೇಕು. ಸಾಲವೆಂಬುದು ಪವಿತ್ರವಾದ್ದರಿಂದ ಅದಕ್ಕೆ ಬೆಲೆ ನಿಷ್ಕರ್ಷಿಸುವುದು ಅಕ್ಷಮ್ಯ ಅಪರಾಧ ಎಂದು ಆಗ ಸಾಮಾನ್ಯವಾಗಿ ಭಾವಿಸಲಾಗಿತ್ತು. ಗ್ರೀಸ್ ಮತ್ತು ರೋಂಗಳಲ್ಲೂ ಯಾವ ದರದಲ್ಲಿ ಹಣವನ್ನು ಕೊಟ್ಟರೆ ಅದು ಕುಸೀದವಾಗುತ್ತದೆ ಎಂದು ಹೇಳಬೇಕಾಗಿರಲಿಲ್ಲ. ಏಕೆಂದರೆ ಮೂಲತಃ ಅಸಲಿಗಿಂತ ಹೆಚ್ಚಿನದೆಲ್ಲ ಕುಸೀದ ಎಂದು ಭಾವಿಸಲಾಗಿತ್ತು. ಕಟ್ಟಳೆಯನ್ನು ಮೀರಿದ ಕುಸೀದ ವ್ಯವಹಾರ ಮಹಾಪರಾಧವೆನಿಸಿತ್ತು-ಅದಕ್ಕೆ ಗಡಿಪಾರು ಶಿಕ್ಷೆ ವಿಧಿಸಲಾಗುತ್ತಿತ್ತು. ಬಂಡವಾಳವನ್ನು ಕ್ರಯಕ್ಕೆ ಮಾರುವುದನ್ನು ಚರ್ಚ್ ಮಧ್ಯಯುಗದ ವರೆಗೂ ನಿಷೇದಿಸಿಕೊಂಡು ಬಂದಿದ್ದರೂ ಹಣದ ಅವಶ್ಯಕತೆ ಇದ್ದವರು ಅದರ ವೆಚ್ಚವನ್ನು ಭರಿಸುವುದಾದರೆ ಅಂಥವರು ಹಣ ತೆಗೆದುಕೊಳ್ಳುವುದಕ್ಕೆ ಅಡ್ಡಿಯಿರಲಿಲ್ಲ. ಕ್ರೈಸ್ತರಲ್ಲಿ ಕುಸೀದದ ವಿರುದ್ಧ ಕಾನೂನುಗಳಿದ್ದರೂ ಯೆಹೂದ್ಯರು ಚರ್ಚಿನ ಅಧಿಕಾರಕ್ಕೆ ಒಳಪಡದಿದ್ದುದರಿಂದ ಅವರಿಗೆ ಇದು ಅನ್ವಯಿಸುತ್ತಿರಲಿಲ್ಲ. ಕೊನೆಗೆ ಕ್ರೈಸ್ತಮತೀಯ ವ್ಯಾಪಾರಿಗಳು ಬ್ಯಾಂಕಿಂಗ್ ಉದ್ಯಮದಲ್ಲಿ ತೊಡಗಿದಾಗ, ಅವರು ಕುಸೀದ ಪ್ರವರ್ತಕರೆಂದು ದೂಷಣೆಗೆ ಒಳಗಾದರಾದರೂ ಅವರು ಚರ್ಚಿನ ಮತ್ತು ರಾಜರ ಕೃಪೆಗೆ ಒಳಗಾಗಿದ್ದುದರಿಂದ, ದೋಷವಿಮುಕ್ತರಾಗಿದ್ದರು. ಅನಂತರ ಹಣಕಾಸಿನ ಆವಶ್ಯಕತೆಗಳು ಹೆಚ್ಚಾದಂತೆ ಚರ್ಚಿನ ಅಧಿಕಾರಿಗಳು ಹಣವ್ಯವಹಾರದ ಬಗ್ಗೆ ಸಡಿಲ ದೃಷ್ಟಿ ತಳೆಯಲಾರಂಭಿಸಿದರು. ಸಾಲದ ಹಣಕ್ಕೆ ಬಡ್ಡಿ ಹಾಕುವುದನ್ನು ನಿಷೇಧಿಸಿತ್ತಾದರೂ ಅವಧಿ ಮೀರಿದಾಗ ದಂಡ ವಿಧಿಸುವುದಕ್ಕೆ ಅವಕಾಶವಿತ್ತು. 16ನೆಯ ಶತಮಾನದ ಹೊತ್ತಿಗೆ ಚರ್ಚು ಕೂಡ ಸಾಲ ಕೂಡಲು ತೊಡಗಿದಾಗ ಈ ವ್ಯವಹಾರಕ್ಕೆ ತಗಲುವ ಖರ್ಚನ್ನು ಪಡೆಯುವ ಉದ್ದೇಶದಿಂದ ಅಲ್ಪ ಪ್ರಮಾಣದಲ್ಲಿ ಬಡ್ಡಿ ವಿಧಿಸಲು ತೊಡಗಿತು. 16ನೆಯ ಶತಮಾನದಲ್ಲಿ ಸರಳವಾದ ಕುಸೀದ ನೀತಿ ರಚಿತವಾಗಿ, ಬಡ್ಡಿ ವಿಧಿಸುವುದು ಅಕ್ಷಮ್ಯ ಅಪರಾಧವಲ್ಲ ಎಂಬ ನಿಲವನ್ನು ಕೆಲವು ಅಧಿಕಾರಿಗಳು ತಳೆದರು. ಅಲ್ಪವಾದ ಬಡ್ಡಿ ವಿಧಿಸಬಹುದೆಂದು ಪ್ರಚಾರಗಳೂ ನಡೆದುವು. 16-17ನೆಯ ಶತಮಾನಗಳಲ್ಲಿ ಕುಸೀದಕ್ಕೆ ಇದ್ದ ಪ್ರತಿಬಂಧಕಗಳನ್ನು ತೆಗೆದುಹಾಕುವ ಪ್ರಯತ್ನಗಳು ನಡೆದುವು. 

	18ನೆಯ ಶತಮಾನದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿಯಿಂದಾಗಿ ಬಂಡವಾಳ ವ್ಯವಸ್ಥೆ ಬೆಳೆದಂತೆಲ್ಲ ಚರ್ಚಿನ ನಿಬಂಧನೆಗಳು ಮೂಲೆಗೆ ಬಿದ್ದುವು. ಬಂಡವಾಳವನ್ನು ಎರವು ನೀಡಿದ್ದಕ್ಕೆ ಪ್ರತಿಫಲವಿರಬೇಕೆಂಬುದು ಅಂಗೀಕೃತವಾದರೂ ಯಾವ ದರದಲ್ಲಿ ಬಡ್ಡಿ ವಿಧಿಸಿದರೆ ಅದು ಕುಸೀದವಾಗುತ್ತದೆ ಎಂಬುದು ಮಾತ್ರ ಸ್ಪಷ್ಟಪಡಲಿಲ್ಲ. ಈ ಮಧ್ಯೆ ಕೆಲವು ಸರ್ಕಾರಗಳು ಬಡ್ಡಿಯ ಗರಿಷ್ಠಮಿತಿಯನ್ನು ನಿರ್ಧರಿಸಿದುವು. ನಿರಾತಂಕ ಸ್ವಾತಂತ್ರ್ಯ ನೀತಿ ಅನುಷ್ಠಾನಕ್ಕೆ ಬಂದಾಗ ಮೇಲಿನ ನಿರ್ಬಂಧ ಕಡಿಮೆಯಾಗತೊಡಗಿತು. 1682ರಲ್ಲಿ ವಿಲಿಯಂ ಪೆಟಿಯೂ ಒಂದು ಶತಮಾನದ ತರುವಾಯ ಫ್ರಾನ್ಸಿನ ಟರ್ಗೋನೂ ಸಾಲ ವ್ಯವಹಾರಗಳಲ್ಲಿ ಬಡ್ಡಿ ಇರಬೇಕೆಂದು ವಾದಿಸಿದರು. 1787ರಲ್ಲಿ ಬೆಂಥ್ಯಾಂ ಕುಸೀದವನ್ನು ಸಮರ್ಥಿಸಿ ಗ್ರಂಥ ಬರೆದ. ವಸ್ತುಗಳ ವ್ಯಾಪಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುವಂತೆಯೆ ಹಣದ ವ್ಯವಹಾರದಲ್ಲೂ ಸ್ವಾತಂತ್ರ್ಯವಿರಬೇಕೆಂದು ವಾದಿಸಿದ. ಬಡಜನರ ಹಿತವನ್ನು ರಕ್ಷಿಸುವ ನೆಪದಿಂದ ಈ ಕಾನೂನುಗಳು ಅವರು ಸಾಲಪಡೆದು ಅಭಿವೃದ್ಧಿಯಾಗದಂತೆ ಮಾಡುತ್ತವೆ. ಆದ್ದರಿಂದ ಬಡಜನರ ಹಿತದೃಷ್ಟಿಯಿಂದ ಈ ನಿರ್ಬಂಧಗಳನ್ನು ರದ್ದುಮಾಡಬೇಕು ಎಂದು ಕೆಲವು ಮುಖಂಡರು ವಾದಿಸಿದರು. 19ನೆಯ ಶತಮಾನದಲ್ಲಿ ಕುಸೀದವಿರುದ್ಧವಾದ ಕಾನೂನುಗಳು ರದ್ದಾದುವು. 

	ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಅತಿಯಾಗಿ ಬಡ್ಡಿ ವಿಧಿಸುವುದಕ್ಕೆ ವಿರೋಧವಿತ್ತು. ಒಮ್ಮೆ ತೆಗೆದುಕೊಂಡ ಹಣದ ಬಡ್ಡಿ ಅಸಲಿನ ಎರಡರಷ್ಟನ್ನು ಮೀರಬಾರದು, ಕಾಯಕ ಮತ್ತು ಚಕ್ರಬಡ್ಡಿ ವಸೂಲಿ ಕೂಡದು ಎಂದು ಹೇಳಲಾಗಿತ್ತು. ಆಧುನಿಕ ಭಾರತದಲ್ಲಿ ಕೆಲವು ಲೇವಾದೇವಿ ವರ್ಗದವರು ವಿಪರೀತವಾದ ಬಡ್ಡಿ ವಿಧಿಸುತ್ತಿದ್ದರು. ಸಾಹುಕಾರರು ಸೇ. 12-37 1/2ರಷ್ಟು ಬಡ್ಡಿ ವಿಧಿಸುತ್ತಿದ್ದರೆಂದು ಅನೇಕ ವರದಿಗಳು ತಿಳಿಸುತ್ತವೆ. ಭದ್ರತೆಯಿಲ್ಲದ ಸಾಲಕ್ಕೆ ಶೇ.300ರವರಗೆ ಬಡ್ಡಿ ವಿಧಿಸುತ್ತಿದ್ದುದೂ ಉಂಟು. ಈ ರೀತಿಯ ಅಕ್ರಮವಾದ ಬಡ್ಡಿಯನ್ನು ತಪ್ಪಿಸಲು ಭಾರತದಲ್ಲಿ 1918ರಲ್ಲಿ ಒಂದು ಕಾಯಿದೆ ಜಾರಿಗೆ ಬಂದು ಸರ್ಕಾರ ನ್ಯಾಯವಾದ ಬಡ್ಡಿಯನ್ನು ಗೊತ್ತುಮಾಡಲು ಅಧಿಕಾರ ನೀಡಲಾಯಿತು. ಭಾರತದ ಎಲ್ಲ ಪ್ರಾಂತ್ಯ ಸರ್ಕಾರಗಳೂ ಬಡ್ಡಿಯ ದರದ ಕನಿಷ್ಠ-ಗರಿಷ್ಠ ಮಿತಿಗಳನ್ನು ನಿರ್ಧರಿಸುವ ಕಾಯಿದೆಗಳನ್ನು ಮಾಡಿದುವು. ಸಾಹುಕಾರರು ಅತಿಯಾದ ಬಡ್ಡಿ ವಿಧಿಸಿ ಜನರನ್ನು ಶೋಷಿಸಲು ಇಂದಿನ ಕಾನೂನುಗಳು ಅವಕಾಶ ಕೊಡುವುದಿಲ್ಲ.  ಆದರೂ ಖಾಸಗಿ ಕ್ಷೇತ್ರದಲ್ಲಿ ಇಂದಿಗೂ ಇದು ಚಾಲನೆಯಲ್ಲಿದೆ. ಇದು ಸಾರ್ವಜನಿಕವಾಗಿ ತಿಳಿಯದಂತೆ ನಡೆಯುತ್ತದೆ. ನಗರಗಳಲ್ಲಿ, ದೊಡ್ಡ ದೊಡ್ಡ ಉದ್ಯಮಗಳಲ್ಲಿ, ಚಲನಚಿತ್ರ, ಬೃಹತ್ ವಹಿವಾಟು ಕ್ಷೇತ್ರಗಳಲ್ಲಿ ಇದು ಇಂದಿಗು ನಡೆದು ಬರುತ್ತಿದೆ.

	ಭಾರತದಲ್ಲಿ ಅಭದ್ರತೆಯ ಸ್ಥಿತಿಯು ಈ ಕುಸೀದದ ಅಸ್ತಿತ್ವಕ್ಕೆ ಕಾರಣೀಭೂತವಾಗಿದೆಯೆಂದು ಕೆಲವು ಹಿರಿಯ ಲೇಖಕರು ಪ್ರತಿಪಾದಿಸಿದ್ದಾರೆ.  ಬಹುತೇಕ ಸಾಲಗಾರರ ಕನಿಷ್ಠ ಮಟ್ಟದ ಆರ್ಥಿಕ ಸ್ಥಿತಿಯು ಪ್ರಮುಖ ಲಕ್ಷಣವಾಗಿರುವುದರಿಂದ ಇವರಿಗೆ ಸಾಲ ನೀಡಿಕೆಯು ನಷ್ಟ ಸಂಭಾವ್ಯವಾಗಿರುವುದೂ ಕಾರಣವಾಗಿದೆ. ಇವು ಪ್ರಮುಖ ಕಾರಣವಾಗಿದ್ದರೂ ಅದಿಷ್ಟೇ ಕಾರಣವೇನಲ್ಲ. ಸ್ಥಳೀಯ, ಪ್ರಾಂತೀಯ ಆಚಾರ-ಸಂಸ್ಕøತಿಗಳೂ ಪ್ರಮುಖ ಪಾತ್ರವಹಿಸಿವೆ.  ನಗರ, ಪಟ್ಟಣಗಳಲ್ಲಿ ಕುಸೀದ ಪದ್ಧತಿ ಕುಸಿದಿದ್ದರೂ ಗ್ರಾಮಾಂತರಗಳಲ್ಲಿ ಖಾಸಗಿ ಲೇವಾಲೇವಿದಾರರು ಇಂದಿಗೂ ಕುಸೀದ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

	ಒಟ್ಟಿನಲ್ಲಿ ಕುಸೀದ ಪದ್ಧತಿ ಸಮಾಜದ ಹಿತಕ್ಕೆ ವಿರೋಧವಾಗಿರುವುದರಿಂದ ಇಂದಿನ ವಿಶ್ವದ ಆರ್ಥಿಕತೆಯಲ್ಲಿ ಇದಕ್ಕೆ ಸ್ಥಾನವಿಲ್ಲ. ವ್ಯವಸ್ಥಿತವಾದ ಬ್ಯಾಂಕಿಂಗ್ ಪದ್ಧತಿ ಮತ್ತು ಸಹಕಾರ ಪದ್ಧತಿ ಬೆಳೆದಂತೆಲ್ಲ ಇದು ಕಣ್ಮರೆಯಾಗುತ್ತಿದೆ. 
(ಎನ್.ಜಿ.ಸಿ.)
(ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ